ಬಾರಿಸು ಕನ್ನಡ ಡಿಂಡಿಮವಾ…
ಓ ಕರ್ನಾಟಕ ಹೃದಯ ಶಿವಾ…
ಸತ್ತಂತಿಹರನು ಬಡಿದೆಚ್ಚರಿಸು…. – ಕುವೆಂಪು
ನಿಜಕ್ಕೂ ಕನ್ನಡಿಗರು ಸತ್ತಂತಿಹರೇ ಎಂದರೆ ಹೌದು ಎನ್ನಬೇಕಾಗುತ್ತದೆ. ಏಳಿಗೆ ಎಂಬುದನ್ನು ಆರ್ಥಿಕ, ಸಾಮಾಜಿಕ, ರಾಜಕೀಯ ಏಳಿಗೆಗಳಿಗೆ ಸೀಮಿತಗೊಳಿಸಿ ನೋಡಿದಾಗ ಯಾವುದೇ ನಾಡಿನ ಏಳಿಗೆ ನಿಂತಿರುವುದು ಕಲಿಕೆ, ದುಡಿಮೆ, ಛಲ ಮತ್ತು ಒಗ್ಗಟ್ಟುಗಳೆಂಬ ನಾಲ್ಕು ಕಂಬಗಳ ಮೇಲೆ ಎಂಬುದು ಅರಿವಾಗುತ್ತದೆ. ಯಾವುದೇ ಯಶಸ್ವಿಯಾದ ನಾಡನ್ನು ನೋಡಿದರೂ ಅವುತಮ್ಮ ತಾಯ್ನುಡಿಯ ಸುತ್ತಲೇ ತಮ್ಮೆಲ್ಲಾ ವ್ಯವಸ್ಥೆಗಳನ್ನು ಕಟ್ಟಿಕೊಂಡಿರುವುದು ಕಾಣುತ್ತದೆ. ಇದನ್ನು ನಾವು ವಿದೇಶವೊಂದರ ಉದಾಹರಣೆಯೊಂದಿಗೆ ಇನ್ನಷ್ಟು ಸುಲಭವಾಗಿ ಅರಿತುಕೊಳ್ಳಬಹುದು. ಒಬ್ಬ ಜಪಾನಿ ಮಗುವಿಗೆ ಅದು ಹುಟ್ಟಿದ ಕ್ಷಣದಿಂದ ಕೇಳುವ ಲಾಲಿ ಹಾಡಿನಿಂದ ಹಿಡಿದು, ಓದುವ ಎಲ್ಲಾ ಓದು, ಮಾಡುವ ಎಲ್ಲಾ ಸಂಶೋಧನೆ, ದುಡಿಮೆಯ ಎಲ್ಲಾ ಕ್ಷೇತ್ರ, ಪಡೆಯುವ ಎಲ್ಲಾ ಸೇವೆ, ಕೊಳ್ಳುವ ಎಲ್ಲಾ ಪದಾರ್ಥಗಳು ಮತ್ತು ಸೇವೆ ಅದರ ತಾಯ್ನುಡಿಯಲ್ಲೇ ಸಿಗುತ್ತದೆ. ಜಪಾನಿನಲ್ಲಿ ಹುಟ್ಟಿ ಜಪಾನಿ ನುಡಿಯೊಂದನ್ನೇ ಕಲಿತ ವ್ಯಕ್ತಿಯೊಬ್ಬನಿಗೆ ತನ್ನೆಲ್ಲಾ ಕೆಲಸಗಳನ್ನೂ ಸುಲಭವಾಗಿ ಸಹಜವಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯಕಾರಣ ಹೊಸತೇನೇ ಬಂದರು ಅದನ್ನು ಜಪಾನಿ ನುಡಿಗೆ ತಂದುಕೊಳ್ಳುವ ಆ ಸಮಾಜದ ಗುಣ. ಈ ವಿಷಯದಲ್ಲಿ ಆಯಾನಾಡಿನ ಸರ್ಕಾರಗಳ ಪಾತ್ರವೂ ಹಿರಿದಿದೆ. ಫ್ರಾನ್ಸ್ ದೇಶದಲ್ಲಿ ಅಲ್ಲಿನ ಸರ್ಕಾರ ಜನರು ಆಡುವ ನುಡಿಯ ಆಯ್ಕೆಯ ಸ್ವಾತಂತ್ರ್ಯವನ್ನು ಜನರಿಗೆ ಕೊಟ್ಟಿದ್ದರೂ ಕೆಲಸದ ಜಾಗದಲ್ಲಿ ಮತ್ತು ವಾಣಿಜ್ಯ ವಹಿವಾಟಿನಲ್ಲಿ ಫ್ರೆಂಚ್ ಬಳಸುವುದನ್ನು ಕಡ್ಡಾಯ ಮಾಡಿದೆ. ಆದರೆ ಈ ಪರಿಸ್ಥಿತಿ ನಮ್ಮ ನಾಡಿನಲ್ಲಿದೆಯೇ? ಬರಿಯ ಕನ್ನಡವನ್ನು ಬಲ್ಲವನಿಗೆ ತನ್ನದೇ ನಾಡಿನಲ್ಲಿ ಬದುಕುವುದು ದಿನೇ ದಿನೇ ಕಠಿಣವಾಗುತ್ತಿರುವುದು ದಿಟವಲ್ಲವೇ? ಇಂತಹ ಪರಿಸ್ಥಿತಿಗೆ ಕಾರಣ ನಮ್ಮ ನಾಡಿನ ರೀತಿನೀತಿ, ಕಾಯ್ದೆ ಕಾನೂನುಗಳೂ ತಕ್ಕಮಟ್ತಿಗೆ ಕಾರಣವಲ್ಲವೇ? ಎಲ್ಲಕ್ಕೂ ಮಿಗಿಲಾಗಿ ಕನ್ನಡಿಗರು ಕಡೆಗಣಿಸಿದ್ದಾರೇನೋ ಎನ್ನುವಂತಿರುವ ಕನ್ನಡತನದ ಕೊರತೆ ಕಾರಣವಲ್ಲವೇ?
ನಮ್ಮ ನಾಡಿನಲ್ಲಿ ಕನ್ನಡವೊಂದನ್ನೇ ಬಲ್ಲ ಒಬ್ಬ ಸಾಮಾನ್ಯ ನಾಗರೀಕನಿಗೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಯಾವುದೇ ಹಿಂಜರಿಕೆ, ಕೀಳರಿಮೆಯಿಲ್ಲದೇ ಮಾಡಿಕೊಳ್ಳುವುದು ಸಾಧ್ಯವಾಗುವ, ತನ್ನ ಬದುಕಿನಲ್ಲಿ ಏಳಿಗೆ ಸಾಧಿಸಲು ಬೇರೊಂದು ನುಡಿಯ ಕಲಿಕೆ ಅನಿವಾರ್ಯ ಎನ್ನುವುದು ಇಲ್ಲವಾಗುವ ದಿನ ಬಂದಂದು ನಿಜಕ್ಕೂ ನಾಡಿನ ಮತ್ತು ನಾಡಜನರ ಏಳಿಗೆಯ ಕನಸು ನನಸಾಗುವುದು. ಇಂಥದ್ದೊಂದು ದಿನ ತಾನಾಗೇ ಎಂದಿಗೂ ಬಾರದು. ಕನ್ನಡದ ಜನರು ತಾವಾಗೇ ದೇಶ ಕಾಲಗಳಲ್ಲಿ ಒಗ್ಗಟ್ಟನ್ನು ಸಾಧಿಸುವ ಮೂಲಕ ಈ ಗುರಿಯನ್ನು ಮುಟ್ಟಲು ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕನ್ನಡಿಗನಿಗೆ ಏಳಿಗೆಯ ಪರಮಗುರಿಯೇ ಕಾಣುತ್ತಿದೆ ಎನ್ನಿಸದು. ಕಾಣುತ್ತಿದ್ದರೂ ಅದನ್ನು ಮುಟ್ಟುವ ದಾರಿ ಕಾಣುತ್ತಿದೆ ಎನ್ನಿಸದು. ಈ ಗುರಿ ಮತ್ತು ದಾರಿಯನ್ನು ಕಂಡುಕೊಳ್ಳುವ ಮತ್ತು ಕಂಡುಕೊಂಡಿದ್ದನ್ನು ಕನ್ನಡಿಗರಿಗೆ ಮುಟ್ಟಿಸುವ ಹಿರಿಯ ಗುರಿ ನಮ್ಮದಾಗಬೇಕು.
ಕೃಪೆ : https://kannadadimdima.wordpress.com/